ಅಧ್ಯಕ್ಷ
	-ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯಗಳ ಶಾಸನಸಭೆಗಳಲ್ಲಿ ಕಾರ್ಯಕಲಾಪಗಳನ್ನು ನಿಯಂತ್ರಿಸುವುದಕ್ಕೆ, ಆ ಸಭೆಗಳ ಘನತೆಗೌರವಗಳನ್ನು ಕಾಪಾಡುವುದಕ್ಕೆ, ಆರಿಸಲ್ಪಟ್ಟ ಅಧಿಕಾರಿ (ಸ್ಪೀಕರ್). ಶಾಸನಸಭೆಯಲ್ಲಿ ಸದಸ್ಯರು ಚರ್ಚಿಸಿ ಕೈಗೊಳ್ಳುವ ನಿರ್ಣಯಗಳು, ಅನುಮೋದಿಸುವ ಕಟ್ಟಳೆಗಳು ನಾಡಿನ ಭವಿಷ್ಯವನ್ನು ರೂಪಿಸುತ್ತವೆ. ವಿರೋಧಾಭಿಪ್ರಾಯಗಳಿಂದ ಕೂಡಿದ ಆ ಚರ್ಚೆಯಲ್ಲಿ ಭಾಗವಹಿಸುವವರು ಔಚಿತ್ಯ ಸಭ್ಯತೆಗಳನ್ನು ಮರೆತು ಆರೋಪ ಪ್ರತ್ಯಾರೋಪಗಳಿಂದ ಮರ್ಯಾದೆಗೆಟ್ಟ ರೀತಿಯಲ್ಲಿ ನಡೆದುಕೊಂಡರೆ ನಾಡಿಗೇ ಅಪಕೀರ್ತಿ. ನಾನಾ ವಿಷಯಗಳನ್ನು ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಬೇಕಾದ ಈ ಶಾಸನಸಭೆಯಲ್ಲಿ ಕಾಲಕ್ಕೆ ಬಹಳ ಬೆಲೆ; ಅನಾವಶ್ಯಕವಾದ ವಾದಗಳಿಂದ ದೀರ್ಘ ಭಾಷಣಗಳಿಂದ ಸಭೆಯ ಕಾರ್ಯಕ್ಕೆ ಅಡ್ಡಿಯಾಗಕೂಡದು. ಮೊದಲೇ ಹಾಕಿಕೊಂಡ ಪಟ್ಟಿಗನುಸಾರವಾಗಿ ಕಾರ್ಯಕಲಾಪಗಳು ಅಚ್ಚುಕಟ್ಟಾಗಿ ನಡೆಯಬೇಕು. ಇವೆಲ್ಲವನ್ನೂ ನಿಯಂತ್ರಿಸುವ ಗುರುತರ ಜವಾಬ್ದಾರಿ ಅಧ್ಯಕ್ಷನದು.

	ಸಭೆಯ ಅಧಿವೇಶನದ ಕಾಲದಲ್ಲಿ ಅಧ್ಯಕ್ಷನಾಗಲಿ, ಅವನ ಗೈರುಹಾಜರಿಯಲ್ಲಿ ಉಪಾಧ್ಯಕ್ಷನಾಗಲಿ, ಸಭೆಯ ಕಾರ್ಯಕಲಾಪಗಳನ್ನು ನಡೆಸುತ್ತಾರೆ; ಈ ಕಾರ್ಯಕಲಾಪಗಳಿಗೆ ಸಂಬಂಧಿಸಿದ ನಿಯಮಗಳನ್ನು ಎಲ್ಲರೂ ಪಾಲಿಸುವಂತೆ ನೋಡಿಕೊಳ್ಳುತ್ತಾರೆ. ಅಧ್ಯಕ್ಷನೇ ಈ ನಿಯಮಗಳ ಮೂರ್ತರೂಪವೆನ್ನಬಹುದು; ಆತನ ತೀರ್ಮಾನಕ್ಕೆ ಎಲ್ಲರೂ ತಲೆಬಾಗಬೇಕು. ಕೂಡಲೇ ಚರ್ಚೆ ನಡೆಯಬೇಕೆಂದು ತುರ್ತು ಪರಿಸ್ಥಿತಿಯ ವಿಷಯವೊಂದನ್ನು ಸದಸ್ಯರಲ್ಲೊಬ್ಬರು ಮಂಡಿಸಿದಾಗ, ಆ ವಿಷಯವನ್ನು ಕೂಡಲೆ ತೆಗೆದುಕೊಳ್ಳುವುದು ಬಿಡುವುದು ಅಧ್ಯಕ್ಷನ ತೀರ್ಪಿಗೆ ಸೇರಿದ್ದು. ಸೂಚಿಸಿದ ತಿದ್ದುಪಡಿಗಳಲ್ಲಿ ಯಾವುದನ್ನು ತೆಗೆದುಕೊಳ್ಳಬೇಕು ಯಾವುದನ್ನು ತಳ್ಳಿಹಾಕಬೇಕು ಎಂಬುದನ್ನು ನಿರ್ಧರಿಸುವುದು ಅವನ ಕೆಲಸ. ಅವನು ಅಸಂಬದ್ಧವಾದ ಭಾಷಣಗಳನ್ನೂ ಪುನರಾವೃತ್ತಿಗಳನ್ನೂ ತಡೆಗಟ್ಟುವ ಅಧಿಕಾರ ಹೊಂದಿದ್ದಾನೆ. ಸದಸ್ಯರಲ್ಲಿ ಅಕ್ರಮವಾದ ಅಥವಾ ಗಲಭೆ ಎಬ್ಬಿಸುವ ನಡತೆ ಕಂಡುಬಂದಲ್ಲಿ ಅವರಿಗೆ ಎಚ್ಚರಿಕೆ ಕೊಡುತ್ತಾನೆ, ಆಡಿದ ಮಾತುಗಳನ್ನು ಹಿಂತೆಗೆದುಕೊಳ್ಳುವಂತೆ ಅವರಿಗೆ ಆಜ್ಞೆ ಮಾಡುತ್ತಾನೆ. ಇದನ್ನೂ ಲೆಕ್ಕಿಸದೆ ಮುಂದುವರಿದವರು ಅವಿಧೇಯರೆಂದು ಪರಿಗಣಿಸುವ (ನೇಮಿಂಗ್ ಎ ಮೆಂಬರ್) ಕೆಲಸ ಅಧ್ಯಕ್ಷನದು. ಆಗ ಅವನ ಸದಸ್ಯತ್ವವೇ ತಾತ್ಕಾಲಿಕವಾಗಿ ರದ್ದಾಗುತ್ತದೆ. ಸಾಮೂಹಿಕ ಗಲಭೆಯೆದ್ದ ಸಂದರ್ಭದಲ್ಲಿ ಅಂದಿನ ಅಧಿವೇಶನವನ್ನು ಅಧ್ಯಕ್ಷ ಮುಕ್ತಾಯಗೊಳಿಸಬಹುದು. ಎಲ್ಲ ದೃಷ್ಟಿಕೋನಗಳಿಂದಲೂ ಚರ್ಚಿತ ವಿಷಯದ ಮೇಲೆ ಬೆಳಕು ಬೀಳಬೇಕೆಂಬ ಉದ್ದೇಶದಿಂದ ಚರ್ಚೆಯಲ್ಲಿ ಭಾಗವಹಿಸುವವರ ಕ್ರಮಪಟ್ಟಿಯನ್ನು ಆತನೇ ತಯಾರಿಸುತ್ತಾನೆ.

	ಅವನ ಸಮದರ್ಶಿತ್ವ ವ್ಯಾಪಕವಾದ ಅವನ ಅಧಿಕಾರದಷ್ಟೇ ಮುಖ್ಯವಾದದ್ದು. ಅಧ್ಯಕ್ಷನಾಗಿ ಆರಿಸಲ್ಪಟ್ಟ ಕೂಡಲೆ ಅವನು ತನ್ನ ರಾಜಕೀಯ ಪಕ್ಷ ಅಥವಾ ಕೂಟದ ಸಂಬಂಧವನ್ನು ತ್ಯಜಿಸುತ್ತಾನೆ; ನ್ಯಾಯವಾದ ನಿರ್ಣಯ ಹೊರಬೀಳಬೇಕಾದರೆ ನಾನಾ ಪಕ್ಷಗಳಿಂದ ಸಂಸತ್ತಿನಲ್ಲಿ ಪ್ರತಿಯೊಂದು ಪಕ್ಷದವರ ಅಭಿಪ್ರಾಯಕ್ಕೂ ಅವನು ಸಮಾನ ಮನ್ನಣೆ ಗೌರವಗಳನ್ನು ಕೊಡಬೇಕಾಗುತ್ತದೆ. ನಡೆವ ಚರ್ಚೆಯಲ್ಲಿ ತನ್ನ ವೈಯಕ್ತಿಕ ಒಲವು ಅಭಿಪ್ರಾಯಗಳಿಗೆ ಎಡೆಗೊಡುವಂತಿಲ್ಲ. ಸಭೆಯಲ್ಲಿ ಸದಸ್ಯರು ನ್ಯಾಯಸಮ್ಮತರೀತಿಯಲ್ಲಿ ತಮ್ಮ ನಿಶ್ಚಿತಾಭಿಪ್ರಾಯಗಳನ್ನು ಮಂಡಿಸಲು ಅವಕಾಶ ಕೊಡುವುದು ಅವನ ಪ್ರಥಮ ಕರ್ತವ್ಯವಾದ್ದರಿಂದ, ಉದ್ರೇಕಗೊಂಡು ವಿನಯಮೀರಿ ಮಾತನಾಡುವುದು, ವೈಯಕ್ತಿಕದೂಷಣೆ, ಅವಾಚ್ಯಶಬ್ದಗಳ ಪ್ರಯೋಗ, ಅನಾವಶ್ಯಕ ಟೀಕೆ ಮುಂತಾದ ಅಕ್ರಮಗಳನ್ನು ಸಂವಿಧಾನ ತನಗೆ ಕೊಟ್ಟಿರುವ ಅಧಿಕಾರಬಲದಿಂದ ತಡೆಗಟ್ಟುತ್ತಾನೆ. ಪಕ್ಷಾತೀತನಾಗಿರುವುದರಿಂದ ಅವನು ಚರ್ಚೆಗಳಲ್ಲಿ ಭಾಗವಹಿಸುವದೇ ಇಲ್ಲ. ಮತದಾನದಲ್ಲಿ ಪಕ್ಷಗಳು ನೀಡಿದ ಮತಗಳು ಸಮಸಂಖ್ಯೆಯಲ್ಲಿದ್ದರೆ, ಆಗ ಮಾತ್ರ ತನ್ನ ನಿರ್ಧಾರಕ ಅಭಿಮತವನ್ನು (ಕ್ಯಾಸ್ಟಿಂಗ್ ವೋಟ್) ನೀಡುತ್ತಾನೆ; ಆದರೆ ಆಗಲೂ ವಿಷಯದ ಯುಕ್ತತೆ ಅಥವಾ ಯೋಗ್ಯತೆಯ ವಿಚಾರವಾಗಿ ತನ್ನ ಅಭಿಪ್ರಾಯ ನೀಡಲು ಅವನಿಗೆ ಅಧಿಕಾರವಿಲ್ಲ.

	ಹೀಗೆ ಅಧ್ಯಕ್ಷ ಶಾಸನಸಭೆಯ ಪ್ರತಿನಿಧಿ; ಸಭೆಯ ಸ್ವಾತಂತ್ರ್ಯ ಗೌರವಗಳ ಸಂಕೇತ. ಶಾಸನಸಭೆ ಪ್ರಜೆಗಳ ಪ್ರತಿನಿಧಿಯಾಗಿರುವುದರಿಂದ ಅಧ್ಯಕ್ಷ ಒಂದು ದೃಷ್ಟಿಯಲ್ಲಿ ರಾಷ್ಟ್ರಸ್ವಾತಂತ್ರ್ಯವನ್ನೇ ಪ್ರತಿನಿಧಿಸುತ್ತಾನೆ. ಆದ್ದರಿಂದ ಅವನ ಸ್ಥಾನ ಅತ್ಯಂದ ಘನವಾದದ್ದು, ಗೌರವಯುತವಾದದ್ದು, ಆ ಸ್ಥಾನವನ್ನಲಂಕರಿಸುವವನು ಸುವ್ಯಕ್ತವಾದ ಸಾಮಥ್ರ್ಯ ಮತ್ತು ನಿಷ್ಪಕ್ಷಪಾತಗಳನ್ನು ಹೊಂದಿರಬೇಕು.

	ಭಾರತದಲ್ಲಿ ಅಧ್ಯಕ್ಷಸ್ಥಾನ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿದೆ. ಇಲ್ಲಿ ಅಧ್ಯಕ್ಷರು ಹೊಂದಿರುವಷ್ಟು ಅಧಿಕಾರವನ್ನು ಬ್ರಿಟಿಷ್ ಕಾಮನ್‍ವೆಲ್ತ್ ರಾಷ್ಟ್ರ ಸಮುದಾಯದ ಇತರ ಯಾವ ರಾಷ್ಟ್ರವೂ ಹೊಂದಿಲ್ಲ. ಲೋಕಸಭೆಯ ರಚನೆ, ಕಾರ್ಯಕ್ರಮ ಮುಂತಾದವುಗಳಿಗೆ ಇಂಗ್ಲೆಂಡಿನ ಕಾಮನ್ಸ್ ಸಭೆಯನ್ನೇ ಮಾದರಿಯಾಗಿ ಇಟ್ಟುಕೊಳ್ಳಲಾಗಿದೆ. ಆದರೂ ಅಧ್ಯಕ್ಷನ ಅಧಿಕಾರವ್ಯಾಪ್ತಿ ಹೆಚ್ಚಾಗಿರುವುದಕ್ಕೆ ಕಾರಣ- ಮೊದಲಲ್ಲೆ ಅಧ್ಯಕ್ಷಸ್ಥಾನವನ್ನಲಂಕರಿಸಿದ ಇಬ್ಬರು ಭಾರತೀಯರ ದಿಟ್ಟತನ ಮತ್ತು ಸಾಹಸ. 1925ರಲ್ಲಿ ಕೇಂದ್ರ ಶಾಸನಸಭೆಯ ಅಧ್ಯಕ್ಷಸ್ಥಾನಕ್ಕೆ ಚುನಾವಣೆ ನಡೆದಾಗ, ಸರ್ಕಾರದ ಬೆಂಬಲ ಪಡೆದಿದ್ದ ತನ್ನ ಪ್ರತಿಸ್ಪರ್ಧಿಯನ್ನು ಎರಡು ವೋಟುಗಳಿಂದ ಸೋಲಿಸಿ ವಿಠಲ್‍ಭಾಯ್ ಪಟೇಲರು ಅಧ್ಯಕ್ಷರಾದರು. ಸರ್ಕಾರದಿಂದ ಸೂಚಿಸಲ್ಪಟ್ಟ ಸ್ಪರ್ಧಿಯನ್ನೇ ಸೋಲಿಸಿದ್ದರಿಂದ ಇನ್ನು ಮುಂದೆ ತಾವು ಶಾಸನಸಭೆಗೆ ಮಾತ್ರ ಜವಾಬ್ದಾರರೆಂದೂ ಬೇರೆ ಯಾರಿಗೂ ಅಧೀನರಲ್ಲವೆಂದೂ ಸಾಧಿಸಿದರು. ಸಭೆಯ ಕಾರ್ಯಕಲಾಪಗಳಲ್ಲಿ ಸರ್ಕಾರದ ಕಾರ್ಯಾಂಗದ ಕೈವಾಡ ನಿಂತುಹೋಯಿತು. ರಾಷ್ಟ್ರರಕ್ಷಣೆಗೆ ಸಂಬಂಧಪಟ್ಟ ಮಸೂದೆಯೊಂದನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂದು ಸರಕಾರದಿಂದ ಸೂಚನೆ ಬಂದಾಗ, ಅದನ್ನು ತೆಗೆದುಕೊಳ್ಳುವುದು ಬಿಡುವುದು ತಮ್ಮ ವಿವೇಚನೆಗೆ ಸಂಬಂಧಿಸಿದ್ದೆಂದು ತಿಳಿಸಿ ಅಧ್ಯಕ್ಷರು ಅದನ್ನು ತಳ್ಳಿಹಾಕಿದರು. ತಮ್ಮ ಕೆಲವು ತೀರ್ಮಾನಗಳನ್ನು ಸರ್ಕಾರದ ಪಕ್ಷ ಬಹಿರಂಗವಾಗಿ ಹಳಿಯುತ್ತಿದ್ದುದನ್ನು ಕಂಡು, ಪ್ರತ್ಯೇಕವಾಗಿ ವಿಧಿಗನುಸಾರವಾದ ಸೂಚನೆಯನ್ನು ಸಭೆಯಲ್ಲಿ ಮಂಡಿಸದೆ ಆ ರೀತಿ ಟೀಕಿಸುವುದು ಸಭೆಯ ಗೌರವಕ್ಕೆ ಕುಂದುಂಟು ಮಾಡುತ್ತದೆಂದು ತಿಳಿಸಿದರು. ಸಭೆಯಲ್ಲಿ, ಅದಕ್ಕೆ ಸೇರಿದ ಆವರಣದಲ್ಲಿ, ಶಿಸ್ತುಭದ್ರತೆಗಳನ್ನು ಕಾಪಾಡುವುದು ತಮ್ಮ ಸ್ವಂತ ಅಧಿಕಾರವ್ಯಾಪ್ತಿಗೆ ಒಳಪಟ್ಟಿಯೆಂಬುದನ್ನು ಸಾಧಿಸಿದರು. ಶಾಸಕಾಂಗದ ಕಚೇರಿಯ ಅಧಿಕಾರಿಗಳು ತಮ್ಮ ಹತೋಟಿಯಲ್ಲಿರಬೇಕು, ಆಡಳಿತದ ಬೇರೆ ಯಾವ ಶಾಖೆಯೂ ಅವರ ಮೇಲೆ ಪ್ರಭಾವ ಬೀರದಂತಿರಬೇಕು ಎಂಬ ನೀತಿಯನ್ನು ಸಮರ್ಥಿಸಿ, 1928ರಲ್ಲಿ ಸರ್ಕಾರ ಅದನ್ನು ಅನುಮೋದಿಸುವಂತೆ ಮಾಡಿದರು.

	ಮಾವ್ಲಂಕರ್ ಅಧ್ಯಕ್ಷರಾಗಿದ್ದ ಕಾಲ ಶಾಸನಸಭೆಯ ಘನತೆ ಗೌರವಗಳ ಬೆಳವಣಿಗೆಯಲ್ಲಿ ಇನ್ನೊಂದು ಸ್ಮರಣೀಯ ಘಟ್ಟ. 1946: ಭಾರತೀಯರ ಸ್ವಾತಂತ್ರ್ಯ ಸಮರದ ಅಂತಿಮಕಾಲ. ಆಗ ಇವರು ಕೇಂದ್ರ ಶಾಸನಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು. ಸ್ಪೀಕರ್ ಎಂಬ ಹೆಸರು ಪ್ರಯೋಗಕ್ಕೆ ಬಂದುದು 1947ರಲ್ಲಿ ಸ್ವಾತಂತ್ರ್ಯಘೋಷಣೆಯಾದ ಅನಂತರ. ರಾಜ್ಯವ್ಯವಸ್ಥಾಸಭೆಯೇ (ಕಾನ್‍ಸ್ಟಿಟ್ಯುಎಂಟ್ ಅಸೆಂಬ್ಲಿ) ಶಾಸನಸಭೆಯ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅವರೇ ಅಧ್ಯಕ್ಷರಾಗಿ ಮುಂದುವರಿದರು. ಲೋಕಸಭೆ, ರಾಜ್ಯಸಭೆಗಳ ರಚನೆಯಾದಮೇಲೆ 1956ರ ಮೇ 27ರಲ್ಲಿ ಲೋಕಸಭೆಯ ಅಧ್ಯಕ್ಷರಾದರು. ಹೊಸ ಸಂವಿಧಾನಕ್ಕನುಸಾರವಾಗಿ ಲೋಕಸಭೆ ನಿರ್ಮಾಣವಾದ ಆ ಪರ್ವಕಾಲದಲ್ಲಿ ನಾಲ್ಕು ವರ್ಷ (1956ರ ವರೆಗೆ) ಅಧ್ಯಕ್ಷರಾಗಿದ್ದು ಆ ಸ್ಥಾನದ ಘನತೆ ಗೌರವಗಳನ್ನು ಭದ್ರಪಡಿಸಿದರು. ಭಾರತ ಸಂವಿಧಾನಕ್ಕನುಗುಣವಾಗಿ ಅಧ್ಯಕ್ಷರ ಅಧಿಕಾರಕ್ಕೆ ರೂಪುಕೊಟ್ಟವರು ಅವರು. 

	ಭಾರತ ಸಂವಿಧಾನದಲ್ಲಿ ಶಾಸನಸಭೆಯ ರಚನೆ ಕಾರ್ಯಕಲಾಪಗಳ ವಿಷಯವಾಗಿ ನಿರ್ದಿಷ್ಟನಿಯಮಗಳಿವೆ. ಅಧ್ಯಕ್ಷಸ್ಥಾನಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವುದರಲ್ಲಿ ಮಾವ್ಲಂಕರ್‍ರವರ ಕೈವಾಡವೇ ಹೆಚ್ಚು. ಅಧ್ಯಕ್ಷರ ವಿಷಯದಲ್ಲಿ ಇತರ ಅನೇಕ ದೇಶಗಳಲ್ಲಿ- ಇಂಗ್ಲೆಂಡಿನಲ್ಲೂ-ಅನುಕರಣೆಯಲ್ಲಿರುವ ಆಡಂಬರದ ಶಿಷ್ಟಾಚಾರಗಳನ್ನು ತೆಗೆದುಹಾಕಿ, ಭಾರತಸಂಸ್ಕøತಿಗನುಗುಣವಾದ ಸರಳತೆಯನ್ನು ಆಚರಣೆಗೆ ತರಲಾಗಿದೆ. ಅವರು ಇಂಥ ಉಡುಪನ್ನೇ ಧರಿಸಬೇಕೆಂಬ ನಿಯಮವಿಲ್ಲ. 1946ರಲ್ಲಿ ತಾವು ಅಧ್ಯಕ್ಷರಾಗಿ ಬಂದಕೂಡಲೆ ಮಾವ್ಲಂಕರರು ಅಧಿಕಾರ ಸೂಚಕವಾಗಿ ಧರಿಸಬೇಕಾಗಿದ್ದ ಕೃತಕ ತಲೆಗೂದಲ ಕುಲಾವಿಯನ್ನು (ವಿಗ್) ತ್ಯಜಿಸಿದರು. ಅಧ್ಯಕ್ಷರು ಸಭೆಗೆ ಬರುತ್ತಿದ್ದಾರೆಂಬುದನ್ನು ಶಿಸ್ತುಪಾಲನಾಧಿಕಾರಿಯೊಬ್ಬ ಶ್ರುತಪಡಿಸುತ್ತಾನೆ. ಕೂಡಲೆ ಎಲ್ಲರೂ ಎದ್ದುನಿಲ್ಲುತ್ತಾರೆ. ತಮ್ಮ ಪೀಠದ ಹತ್ತಿರ ಬಂದಕೂಡಲೆ ಅಧ್ಯಕ್ಷರು ಎಲ್ಲರಿಗೂ ಬಾಗಿ ವಂದಿಸಿ ಕೂತುಕೊಳ್ಳುತ್ತಾರೆ. ಅನಂತರ ಎಲ್ಲರೂ ಕೂರುತ್ತಾರೆ. ಶಿಸ್ತುಪಾಲನಾಧಿಕಾರಿ ಸಮವಸ್ತ್ರ ಧರಿಸಿರುತ್ತಾನೆ. ಆದರೆ ಅವನ ಕೈಲಿ ಅಧಿಕಾರದಂಡ (ಮೇಸ್) ಇಲ್ಲ.

	ಯಾವ ಅನುಕ್ರಮದಲ್ಲಿ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂಬುದನ್ನು ಅಧ್ಯಕ್ಷರು ನಿರ್ಧರಿಸುತ್ತಾರೆ. ಇದರಲ್ಲಿ ಅನೇಕವೇಳೆ ಸಭೆಯ ಮುಖ್ಯಸ್ಥನ (ಲೀಡರ್ ಆಫ್ ದಿ ಹೌಸ್) ಅಭಿಪ್ರಾಯವನ್ನೂ ತೆಗೆದುಕೊಳ್ಳುತ್ತಾರೆ. ಸಭೆಯಲ್ಲಿ ಆಗಬೇಕಾದ ಕಾರ್ಯವೆಷ್ಟಿದೆಯೆಂಬುದನ್ನು ಗಮನಿಸಿ, ಅದಕ್ಕೆ ಅನುಸಾರವಾಗಿ ಸಭೆಯ ಅಧಿವೇಶನ ಪ್ರತಿನಿತ್ಯ ಯಾವಕಾಲದಲ್ಲಿ, ಎಷ್ಟುದಿನ ನಡೆಯಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಸದಸ್ಯರ ಭಾಷಣದ ಕಾಲವನ್ನೂ ನಿರ್ಣಯಿಸುತ್ತಾರೆ. ಸದಸ್ಯರು ಪ್ರಶ್ನೆಗಳ ಯುಕ್ತಾಯುಕ್ತತೆ, ಸೂಕ್ತಕಾಲ ಇವನ್ನೆಲ್ಲ, ನಿರ್ಧರಿಸುವವರು ಅಧ್ಯಕ್ಷರು. ಸಭಿಕರು ಮುಂದೊಡ್ಡುವ ಗೊತ್ತುವಳಿಗಳ, ತಿದ್ದುಪಡಿಗಳ ವಿಚಾರದಲ್ಲೂ ಹೀಗೆಯೇ. ಸ್ಥಾಯೀನಿಬಂಧನೆಗಳ ರಚನೆಯಲ್ಲೂ ಲೋಕಸಭೆ ಅಧ್ಯಕ್ಷರ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆಕೊಟ್ಟಿದೆ. ಸಭೆಯಲ್ಲಿ ಅಧ್ಯಕ್ಷರ ವರ್ತನೆಯ ಬಗ್ಗೆ ಖಂಡನಾಸೂಚನೆಯನ್ನು ಮಂಡಿಸುವುದಕ್ಕೆ ಸದಸ್ಯರಿಗೆ ಅವಕಾಶವಿದೆ. ಆದರೆ ಇದು ಗುರುತರವಾದ ಲೋಪವಾಗಿರಬೇಕು. ರಾಷ್ಟ್ರದ ಹಿತಕ್ಕೆ, ಸಭೆಯ ಗೌರವಕ್ಕೆ, ಕುಂದುತರುವಂಥಾದ್ದಾಗಿರಬೇಕು. ಇಂಥ ಸೂಚನೆ ಬಂದಿರುವುದು ಒಂದೇ ಸಲ, 1954ರ ಡಿಸೆಂಬರ್ 18ನೆಯ ದಿನ. ಅದರ ಮಂಡನೆಗೆ ಕಾರಣ ಕ್ಷುಲ್ಲಕವಾಗಿತ್ತು. ಆಗ ಜವಾಹರ್‍ಲಾಲ್ ನೆಹರೂರವರು ಕೆರಳಿ, ಮಂಡಿಸಿದವರನ್ನೂ ಅವರ ಬೆಂಬಲಿಗರನ್ನೂ ಉಗ್ರವಾಗಿ ಖಂಡಿಸಿ, ಇಂಥ ಸೂಚನೆಗಳಿಗೆ ಅವಕಾಶವೇನೋ ಇದೆ, ಆದರೆ ಅಧ್ಯಕ್ಷಸ್ಥಾನದ ಗೌರವ, ಶಾಸನಸಭೆಯ ಗೌರವ, ರಾಷ್ಟ್ರ ಗೌರವ- ಇವುಗಳಿಗೆ ಧಕ್ಕೆಯಾಗದಂತೆ ಆ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವುದು ಹೇಯ ಕಾರ್ಯ ಎಂದು ಹೇಳಿದರು.

	ಪ್ರಾಂತ್ಯ ಶಾಸನಸಭೆಗಳಲ್ಲಿ ಅಧ್ಯಕ್ಷಸ್ಥಾನ ಅಷ್ಟೊಂದು ದೋಷರಹಿತವಾಗಿಲ್ಲ. ಪಕ್ಷಪ್ರತಿಪಕ್ಷಗಳ ಒತ್ತಾಯ, ಸರ್ಕಾರದ ಕೈವಾಡ ಮುಂತಾದ ಕಾರಣಗಳಿಂದ ಅಲ್ಲಿನ ಅಧ್ಯಕ್ಷರ ಕಾರ್ಯ ಸುಗಮವಾಗಿಲ್ಲ. ಆದರೆ ಉಚ್ಚ ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದು, ಹೊರದೇಶಗಳೂ ಮೆಚ್ಚುವಂತೆ ಕಾರ್ಯನಡೆಸುತ್ತ ಬಂದಿರುವ ಲೋಕಸಭಾಧ್ಯಕ್ಷರ ಮೇಲ್ಪಂಕ್ತಿಯಿಂದ ಅಲ್ಲೂ ಪರಿಸ್ಥಿತಿ ಉತ್ತಮಗೊಳ್ಳುತ್ತದೆಂಬುದರಲ್ಲಿ ಸಂಶಯವಿಲ್ಲ.						
(ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ